ನಮ್ಮ ಕಡಬ ವೆಬ್ ಸೈಟ್ ಸುದ್ದಿ:- (ನಮ್ಮ ಪ್ರತಿನಿಧಿಯಿಂದ)
ನೂಜಿಬಾಳ್ತಿಲ ಗ್ರಾಮದ ಅಡಂಜೆ ಸರಕಾರಿ ಕಿ.ಪ್ರಾ.ಶಾಲಾ ಜಮೀನನ್ನು ಅಳತೆ ಮಾಡಿ ಗಡಿ ಗುರುತು ಮಾಡಬೇಕೆಂದು ಶಾಲಾಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಕಡಬ ತಹಶೀಲ್ದಾರ್, ಕಂದಾಯ ನಿರೀಕ್ಷಕರು ಹಾಗೂ ಭೂಮಾಪನಾ ಇಲಾಖಾಧಿಕಾರಿಗಳಿಗೆ ಸಲ್ಲಿಸಿದ ಮನವಿಭೂ ಮಾಪನಾ ಇಲಾಖಾಧಿಕಾರಿಗಳಿಗೆ ಮನವಿಸಲ್ಲಿಸಿದ ಪರಿಣಾಮ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಇದೀಗ ಜುಲೈ. 24ರಂದು ಜಾಗದ ಅಳತೆ ಮಾಡಿ ಗಡಿ ಗುರುತು ಮಾಡಿಕೊಡುವುದಾಗಿ ಭೂಮಾಪನಾ ಇಲಾಖೆಯ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಒಂದು ವೇಳೆ ಆ ದಿನ ಅಳತೆ ಪೂರ್ತಿಗೊಳಿಸಿ ಜಾಗದ ಗಡಿ ಗುರುತು ಮಾಡಿಕೊಡದಿದ್ದಲ್ಲಿ ಕಡಬ ತಹಶೀಲ್ದಾರ್ ಕಚೇರಿಯ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಕೇಶವ ಗೌಡ ಬಳ್ಳೇರಿ ಎಚ್ಚರಿಸಿದ್ದಾರೆ. ಅಡಂಜೆ ಶಾಲೆಗೆ ಸಂಬಂಧಿಸಿದಂತೆ ಸರ್ವೆ ನಂ. 72/1(ಪಿ22)ರಲ್ಲಿ 1.65 ಎಕ್ರೆ ಜಮೀನು ಇದ್ದು, ಈ ಜಮೀನನ್ನು ಅಳತೆ ಮಾಡಿ ಗಡಿ ಗುರುತಿಸಿಕೊಡಬೇಕೆಂದು ಕಡಬ ವಿಶೇಷ ತಹಶೀಲ್ದಾರ್ಗೆ ಅರ್ಜಿ ಸಲ್ಲಿಸಲಾಗಿತ್ತು. 6 ತಿಂಗಳ ಹಿಂದೆ ಸ್ಥಳಕ್ಕೆ ಭೇಟಿ ನೀಡಿದ ಭೂ ಮಾಪಕರು ಜಾಗದ ಗಡಿಯ ಕುರಿತು ಗೊಂದಲ ಇರುವ ಬಗ್ಗೆ ಶಾಲಾಭಿವೃದ್ಧಿ ಗಮನಕ್ಕೆ ತಂದಿದ್ದರು. . ಆ ಬಳಿಕ ಶಾಲಾಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಹಲವಾರು ಬಾರಿ ಕಡಬದ ಭೂ ಮಾಪನಾ ಇಲಾಖಾ ಕಚೇರಿಗೆ ಭೇಟಿ ನೀಡಿ ಅಳತೆಯನ್ನು ಪೂರ್ತಿಗೊಳಿಸಿ ಗಡಿ ಗುರುತು ಮಾಡಿಕೊಡುವಂತೆ ಕೇಳಿ ಕೊಂಡರೂ ಪ್ರಯೋಜನವಾಗಿರಲಿಲ್ಲ.ಮನವಿ ಸಲ್ಲಿಸುವ ವೇಳೆ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಕೇಶವ ಗೌಡ ಬಳ್ಳೇರಿ, ಉಪಾಧ್ಯಕ್ಷೆ ರಾಜೇಶ್ವರಿ ಕೆರ್ನಡ್ಕ, ಪದಾಧಿಕಾರಿಗಳಾದ ಜಯಪ್ರಕಾಶ್, ಪ್ರೇಮಾ, ಮೇದಪ್ಪ ಗೌಡ, ಕುಸುಮಾವತಿ ಬಳ್ಳೇರಿ, ಲೀಲಾವತಿ ಬಳಕ್ಕ, ಹೇಮಾವತಿ ಬಳಕ್ಕ ಹಾಗೂ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.
Tags
ಕಡಬ ಸಿಟಿ ಸುದ್ದಿ